Abstract: ಭಾರತೀಯ ಸಂಸ್ಕೃತಿಯಲ್ಲಿ ಕಲೆಗಳಿಗೆ ಮುಖ್ಯವಾದ ಸ್ಥಾನವಿದೆ. ಕಲೆಗಳ ಪ್ರೌಢವಾದ ಬೆಳವಣಿಗೆ ಮತ್ತು ಪ್ರಯೋಗ ಭಾರತೀಯ ನಾಗರಿಕತೆಯ ವೈಶಿಷ್ಟ್ಯಗಳಲ್ಲೊಂದು. ಅರವತ್ತನಾಲ್ಕು ಕಲೆಗಳ ಪ್ರಸ್ತಾಪ ಭಾರತೀಯ ಕಲಾ ಪರಂಪರೆಯ ವಿಸ್ತಾರದ ಅರಿವನ್ನು ಮೂಡಿಸುತ್ತದೆ. ಕಲೆಗಳಲ್ಲಿ ಆಶುವಾದದ್ದು ಮತ್ತು ತತ್ ಕ್ಷಣ ಆನಂದವನ್ನು ಉಂಟುಮಾಡುವಂತಹುದೂ ಆದ ಸಂಗೀತವಂತೂ ಭಾರತೀಯ ಪರಂಪರೆಯ ಜೀವಾಳವೇ ಆಗಿದೆ. ಭಾರತೀಯ ಸಂಸ್ಕೃತಿಯ ಮೂಲ ಬೇರುಗಳಾದ ವೇದಗಳಿಂದಲೇ ಭಾರತೀಯ ಸಂಗೀತದ ಉಗಮವಾಗಿದೆ ಎಂದು ವಿದ್ವದಭಿಪ್ರಾಯ. ಇದಕ್ಕೆ ಪ್ರಮಾಣವೂ ವೇದಗಳಲ್ಲೇ ದೊರೆಯುತ್ತದೆ. ಸಂಗೀತವು ಭಾರತೀಯರ ಪ್ರತಿಯೊಂದು ಆಚರಣೆಗಳಲ್ಲಿಯೂ ಹಾಸುಹೊಕ್ಕಾಗಿರುವುದನ್ನು ಪ್ರತ್ಯಕ್ಷವಾಗಿಯೇ ಇಂದೂ ಕಾಣುತ್ತೇವೆ. ಭಾರತೀಯ ಪದ್ಧತಿಯಲ್ಲಿ ಸಮಷ್ಟಿಯ ಕರ್ಮಗಳು ಮತ್ತು ವ್ಯಕ್ತಿಗತ ಅಧ್ಯಾತ್ಮಿಕ ಸಾಧನೆಗಳೆರಡೂ ಪ್ರಾಮುಖ್ಯವನ್ನು ಹೊಂದಿವೆ.
ಸ್ಥೂಲವಾಗಿ ಭಾರತೀಯ ಸಾಂಪ್ರದಾಯಿಕ ಕ್ರಿಯೆಗಳನ್ನು ಶ್ರೌತ ಕರ್ಮಗಳು, ಸ್ಮಾರ್ತ ಕರ್ಮಗಳು ಮತ್ತು ಪುರಾಣೋಕ್ತ ಕರ್ಮಗಳೆಂದು ವಿಂಗಡಿಸಬಹುದು. ವೇದೋಕ್ತವಾದ ಯಜ್ಞಯಾಗಾದಿಗಳು ಶ್ರೌತಕರ್ಮಗಳು, ಸ್ಮೃತಿಗಳಲ್ಲಿ ಉಕ್ತವಾದ ಷೋಡಶ ಕರ್ಮಗಳು ಮುಂತಾದವುಗಳು ಸ್ಮಾರ್ತ ಕರ್ಮಗಳು ಮತ್ತು ವಿವಿಧ ಕಲ್ಪ ಮತ್ತು ಪುರಾಣಗಳಲ್ಲಿ ಬರುವ ವ್ರತಾದಿಗಳು ಪುರಾಣೋಕ್ತ ಕರ್ಮಗಳೆನ್ನಬಹುದು. ಶ್ರೌತಕರ್ಮಗಳಾದ ಸೋಮಯಾಗಗಳಲ್ಲಿಯೂ, ಸ್ಮಾರ್ತಕರ್ಮಗಳಾದ ವಿವಾಹಾದಿ ಸಂಸ್ಕಾರಗಳಲ್ಲಿಯೂ, ಪುರಾಣೋಕ್ತ ಹಬ್ಬ-ಹರಿದಿನಗಳಲ್ಲಿಯೂ ಸಂಗೀತದ ಬಳಕೆ ಅವಿಚ್ಛಿನ್ನವಾಗಿ ನಡೆದು ಬಂದಿದೆ. ವ್ಯಕ್ತಿಗತ ಅಧ್ಯಾತ್ಮಿಕ ಶ್ರೇಯವು ಸಾಧಿತವಾದಾಗಲೂ ದಶವಿಧ ನಾದಗಳ ಸಾಕ್ಷಾತ್ಕಾರವಾಗುತ್ತದೆ. ಶಿವಯೋಗದ ಸಾಧನೆಯಲ್ಲಿಯೂ ಈ ದಶವಿಧ ನಾದಗಳ ಉಲ್ಲೇಖವಿದೆ. ಹೀಗೆ ಭಾರತೀಯ ದರ್ಶನದಲ್ಲಿ ಸಂಗೀತಕ್ಕೆ ಅಮೂಲ್ಯವಾದ ಮಹತ್ವವಿದೆ.
Pareekshith B Vashishta. ಭಾರತೀಯ ಸಂಸ್ಕಾರಗಳು ಮತ್ತು ಧಾರ್ಮಿಕ ಆಚರಣೆಗಳಲ್ಲಿ ಸಂಗೀತ. Int J Kannada Res 2025;11(4):01-05. DOI: 10.22271/24545813.2025.v11.i4a.1170