2025, Vol. 11 Issue 2, Part C
Abstract: “ಭಾರತೀಯ ಸಂಸ್ಕ್ರತಿ ಮತ್ತು ಆಧ್ಯಾತ್ಮಿಕತೆಯ ಭಾವ್ಯೆಕ್ಯತೆಯನ್ನು ಪ್ರತಿಬಿಂಬಿಸುವ ಹಾಗೂ ಮನಪರಿವರ್ತನೆ, ಪರಿಶುದ್ಧತೆ ಮತ್ತು ಸಕಲ ಪಾಪಗಳಿಂದ ಮುಕ್ತರಾಗಿ ಮೋಕ್ಷ ಪ್ರಾಪ್ತಿಯಾಗಿಸುವ ಪರಿಪೂರ್ಣ ಮಾರ್ಗೋಪಾಯ ಕುಂಭ ಮೇಳ”. ಕುಂಭಮೇಳವು ಭಾರತದ ಆಧ್ಯಾತ್ಮಿಕ, ಸಾಂಸ್ಕ್ರತಿಕ ಮತ್ತು ಸಾಮೂಹಿಕ ಸಾರವನ್ನು ಸಾಕಾರಗೊಳಿಸುವ ಒಂದು ಗಮನರ್ಹವಾದ ಹಬ್ಬವಾಗಿದೆ. ಭಕ್ತರಿಗೆ ದೈವಿಕತೆಯೊಂದಿಗೆ ಸಂಪರ್ಕ ಸಾಧಿಸಲು, ಅವರ ಆತ್ಮಗಳನು ಶುದ್ಧೀಕರಿಸಲು ಮತ್ತು ಭಾರತೀಯ ಪರಂಪರೆಯ ಶ್ರೀಮಂತಿಕೆಯನ್ನು ಅನುಭವಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಪವಿತ್ರ ನದಿಗಳ ಸಂಗಮ, ಪುಣ್ಯ ಸ್ನಾನ, ಪಾಪಗಳಿಂದ ಮುಕ್ತಿ ಹಾಗೂ ಮೋಕ್ಷದ ಅಪ್ರತಿಮ ಮಾರ್ಗವಾಗಿದೆ (Atmashraddha, 2010). ಮೇಳದ ಆಚರಣೆಗಳು, ಪ್ರಾಮುಖ್ಯತೆ, ಸಂಸ್ಕ್ರತಿಯ ಅನಾವರಣ ಹಾಗೂ ಖಗೋಳ ಘಟನೆಗಳ ಒಂದು ಪಕ್ಷಿನೋಟವನ್ನು ಈ ಲೇಖನ ಒಳಗೊಂಡಿದ್ದು ಕುಂಭಮೇಳದ ಒಂದು ಸಂಕ್ಷಿಪ್ತ ಪರಿಚಯ ಇದಾಗಿದೆ.
ಭೂಮಿ ಮೇಲಿನ ಬೃಹತ್ ಜಮಾವಣೆ ಹಾಗೂ ಪವಿತ್ರ, ದೈವೀಕ, ಭಾವೈಕ್ಯತೆ, ಆಧ್ಯಾತ್ಮಿಕತೆಯನ್ನು ವರ್ಣಿಸುವ ಅಮೂರ್ತ ಸಾಂಸ್ಕ್ರತಿಕ ಪರಂಪರೆಯೇ ನಮ್ಮ ಕುಂಭಮೇಳ, 45 ಕೋಟಿ ನಿರೀಕ್ಷೆ ಜನರ ಪುಣ್ಯ ಸಂಗಮ/ಸಮಾಗಮ ಈ ಮೇಳ ಪ್ರಯಾಗರಾಜ್‍ನಲ್ಲಿ ನಡೆಯುತ್ತಿರುವ ಈ ಮಹಾ ಉತ್ಸವವನ್ನು ಬಾಹ್ಯಾಕಾಶದಿಂದಲೂ ಕಾಣಬಹುದಾಗಿದೆ. 45 ದಿನಗಳ ಸುಧೀರ್ಘ ಆಚರಣೆಯಲ್ಲಿ ಸಾಧುಗಳು, ಯಾತ್ರಿಗಳು, ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದು ಸಕಲ ಪಾಪಗಳಿಂದ ಮುಕ್ತರಾಗಿ, ಮುಕ್ತಿಯನ್ನು ಪಡೆಯುವ ಸನ್ಮಾರ್ಗವೆಂದರೆ ಉತ್ಪ್ರೇಕ್ಷೆಯಾಗಲಾರದು. ಸಂಸ್ಕ್ರತಿ, ಜ್ಞಾನ, ವಿಜ್ಞಾನ, ಆಧ್ಯಾತ್ಮಿಕ, ಧಾರ್ಮಿಕ, ಜೋತಿಷ್ಯ, ಖಗೋಳಶಾಸ್ತ್ರದ ಪರಿಪೂರ್ಣತೆಯಿಂದ ಬೇರೂರಿರುವ ಭಾವನೆ ಹಾಗೂ ದೃಢ ನಂಬಿಕೆಯ ಮತ್ತೊಂದು ಹೆಸರೇ ‘ಮಹಾ ಕುಂಭ ಮೇಳ’ (Murugesan, 2016) ) ಈ ಮೇಳದಲ್ಲಿ ಸಪ್ತ ಋಷಿಗಳು, ಸಪ್ತ ಚಿರಂಜೀವಿಗಳು ಸಾಮಾನ್ಯರಂತೆ ಬಂದು ಪಾಲ್ಗೊಳ್ಳುತ್ತಾರೆ ಎಂಬ ನಂಬಿಕೆಯೂ ಇದೆ. ಹಾಗೂ 2017ರಲ್ಲಿ UNESCO ಅಂತರಾಷ್ಟ್ರೀಯ ಅಮೂರ್ತ ಸಾಂಸ್ಕ್ರತಿಕ ಪರಂಪರೆಯ ಪಟ್ಟಿಗೆ ಕುಂಭಮೇಳವನ್ನು ಸೇರಿಸಲಾಗಿದೆ.