2023, Vol. 9 Issue 4, Part C
Abstract: ಸಮುದ್ರೋಪಾದಿಯಂತೆ ಅತ್ಯಂತ ವಿಶಾಲವೂ, ಅಗಾಧವೂ ಆದ ಸಂಸ್ಕೃತ ಸಾಹಿತ್ಯವು ಸಮಸ್ತ ಭಾರತೀಯ ಸಾಹಿತ್ಯದ ಮಾತೃಸ್ವರೂಪಿಯಾಗಿದೆ. ಸಮಗ್ರ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಆಚಾರ-ವಿಚಾರಗಳ ಸಾರಸರ್ವಸ್ವವೇ ಇಲ್ಲಿ ತಾಯಿಬೇರಾಗಿ, ಅನೇಕಾನೇಕ ಶಾಖೋಪಾದಿಯಲ್ಲಿ ಸದೃಢವಾಗಿ ಪಸರಿಸಿದೆ. ಸಂಪೂರ್ಣಜಗತ್ತಿನ ಸಾರಸರ್ವಸ್ವವೇ ಶತಕಕೃತಿಗಳಲ್ಲಿ ಲೀನವಾಗಿ, ಅನವರತ ಕಾವ್ಯಸುಧೆಯನ್ನು ಉಣಬಡಿಸುತ್ತಿದೆ ಎನ್ನಬಹುದು. ಶತಕಗ್ರಂಥಗಳಲ್ಲಿ ಮುಖ್ಯವಾಗಿ ಜಗತ್ತಿನ ಸೃಷ್ಟಿ, ಜೀವನ ಸಂಗತಿಗಳು, ಮೌಲ್ಯಗಳು, ಸತ್ಸಂಗತಿ, ವ್ಯವಹಾರ, ನೈತಿಕತೆ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ, ಸಾಹಿತ್ಯಿಕ, ಆಲಂಕಾರಿಕ, ರಾಜನೈತಿಕ, ವೈಜ್ಞಾನಿಕ, ಭೌತಿಕ, ಮಾನಸಿಕ, ಆಧ್ಯಾತ್ಮಿಕ , ಲೌಕಿಕಾಲೌಕಿಕ, ಪಾರಮಾರ್ಥಿಕ, ಸಾಂದರ್ಭಿಕ, ನೈಸರ್ಗಿಕ, ತಾರ್ಕಿಕ, ತೌಲನಿಕ, ಕಾವ್ಯತ್ಮಕ, ಮಾನವೀಯ ಚಿಂತನ-ಮಂಥನಗಳೇ ಹತ್ತು ಹಲವಾರು ವಿಚಾರಧಾರೆಗಳಿಗೆ ಮಹಾಭೂಮಿಕೆಯಾಗಿದೆ.
ಆಧುನಿಕ ಭಾರತೀಯ ಸಂಸ್ಕೃತ ಕವಿಗಳಲ್ಲಿ ಅಲಂಕಾರ-ವ್ಯಾಕರಣವಿದ್ವಾಂಸರಾದ ಮೈಸೂರಿನ ವಿದ್ವಾನ್. ಡಾ|| ಎಚ್.ವಿ.ನಾಗರಾಜರಾವ್ ಮಹೋದಯರು ಅಗ್ರಗಣ್ಯರಾಗಿದ್ದು, ತಮ್ಮ ಸಾಹಿತ್ಯಸೇವೆಗಾಗಿ ’ರಾಷ್ಟ್ರಪತಿ ಪುರಸ್ಕಾರ’ಕ್ಕೂ ಭಾಜನರಾಗಿದ್ದಾರೆ. ನಾಗರಾಜಕವಿಯ ಪ್ರಮುಖ ಶತಕಕೃತಿಗಳಲ್ಲೂ ಶತಾಧಿಕ ಶ್ಲೋಕಗಳಿದ್ದು, ಸಮಸ್ತ ಜೀವ-ಜಗತ್ತಿನ ಅನೇಕಾನೇಕ ವಿಷಯ-ವಿಚಾರಗಳಿಂದ ಸಮೃದ್ಧವಾಗಿದ್ದು, ಆದರ್ಶ ಜೀವನನೀತಿ-ರೀತಿ-ಪ್ರೀತಿಗಳನ್ನು ಪ್ರತಿಬಿಂಬಿಸುವ ಸುಭಾಷಿತಸದೃಶ ಶ್ರೇಷ್ಠಗ್ರಂಥರಚನೆ ಎನಿಸಿವೆ. ಶತಕಗಳ ರಚನೆ ಕೇವಲ ಕಾವ್ಯಸೌಂದರ್ಯದ ಆಸ್ವಾದನೆಗಷ್ಟೇ ಅಲ್ಲದೇ, ಜೀವನದ ಆಮೂಲಾಗ್ರಸಾರವನ್ನೇ ಲೋಕಕ್ಕೆ ಸಮರ್ಪಿಸುವುದಾಗಿದೆ.