2023, Vol. 9 Issue 4, Part B
ಜ್ಯೋತ್ಪತ್ತಿಗೆ ಸಮ್ರಾಟ್ ಜಗನ್ನಾಥನ ಕೊಡುಗೆ
Author(s): ಗಿರೀಶ ಭಟ್ ಬಿ
Abstract: ಫಲಿತಜ್ಯೌತಿಷಗ್ರಂಥಗಳಲ್ಲಿ ನಿರೂಪಿತವಾದ ಶುಭಾಶುಭಫಲಗಳನ್ನು ಆದೇಶಿಸುವುದಕ್ಕಾಗಿಯೇ ಗಣಕರು ಗ್ರಹಸ್ಫುಟಗಳನ್ನು ಮತ್ತು ಭಾವಸ್ಫುಟಗಳನ್ನು ಸಾಧಿಸುತ್ತಾರೆ. ನಿಖರವಾಗಿ ಸಾಧಿಸಿದ ಗ್ರಹಸ್ಫುಟಗಳ ಮತ್ತು ಭಾವಸ್ಫುಟಗಳ ಆಧಾರದಿಂದ ಮಾಡಲ್ಪಟ್ಟ ಫಲಾದೇಶಗಳು ಕೂಡ ಸ್ಫುಟವಾಗಿಯೇ ಇರುತ್ತವೆ. ಆದರೆ ಅಸ್ಫುಟವಾದ ಗ್ರಹಸ್ಫುಟಗಳನ್ನು ಮತ್ತು ಭಾವಸ್ಫುಟಗಳನ್ನು ಆಶ್ರಯಿಸಿ ಮಾಡಲ್ಪಟ್ಟಂತಹ ಫಲಾದೇಶಗಳು ಕೂಡ ಅಸ್ಫುಟವಾಗಿಯೇ ಇರುತ್ತವೆ. ಆದ್ದರಿಂದ ಸ್ಫುಟವಾಗಿ ಫಲಗಳನ್ನು ಆದೇಶಿಸುವುದಕ್ಕಾಗಿ ಗ್ರಹಸ್ಫುಟಗಳನ್ನು ಮತ್ತು ಭಾವಸ್ಫುಟಗಳನ್ನು ನಿಖರವಾಗಿ ಸಾಧಿಸಬೇಕು. ಜ್ಯಾಗಣಿತವನ್ನು ಹೊರತುಪಡಿಸಿ ಗ್ರಹಗಳನ್ನು ಮತ್ತು ಭಾವಗಳನ್ನು ಸ್ಫುಟ ಮಾಡಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಸೂರ್ಯಸಿದ್ಧಾಂತದಿಂದ ಆರಂಭಿಸಿ ಕೇತಕೀಗ್ರಹಗಣಿತದವರೆಗೆ ಎಲ್ಲಾ ಸಿದ್ಧಾಂತ-ತಂತ್ರ-ಕರಣಗ್ರಂಥಗಳಲ್ಲೂ ಜ್ಯೋತ್ಪತ್ತಿಯ ಸಿದ್ಧಾಂತಗಳು ನಿರೂಪಿಸಲ್ಪಟ್ಟಿವೆ. ಆದ್ದರಿಂದ ಜ್ಯೋತ್ಪತ್ತಿಯು ಸಿದ್ಧಾಂತಜ್ಯೋತಿಷ ಪ್ರಮುಖವಾದ ಆಧಾರಭೂತ ಸಿದ್ಧಾಂತ ಎಂದರೆ ಅತಿಶಯೋಕ್ತಿಯಾಗಲಾರದು. ಜ್ಯಾಗಳ ಉತ್ಪತ್ತಿಯೇ ಜ್ಯೋತ್ಪತ್ತಿ. “The Science of calculation for the construction of Sine” ಎಂದ ಆಂಗ್ಲಭಷಯಲ್ಲಿ ಜ್ಯೋತ್ಪತ್ತಿಶಬ್ದದ ವಿವರಣೆ. ವೃತ್ತಪರಿಧಿಯ ಒಂದು ಬಿಂದುವಿನಿಂದ ಇನ್ನೊಂದು ಬಿಂದವಿನವರೆಗೆ ಎಳೆದಂತಹ ಸರಳರೇಖೆಯೇ ಪೂರ್ಣಜ್ಯಾ. ಈ ಪೂರ್ಣಜ್ಯಾವೇ ಸರಳರೇಖಾಗಣಿತದಲ್ಲಿ ಜ್ಯಾ ಎಂಬುದಾಗಿ ವ್ಯವಹರಿಸಲ್ಪಡುತ್ತದೆ. ಆದರೆ ಗ್ರಹವು ತನ್ನ ಸಂಚಾರವೃತ್ತದ ಪರಿಧಿಯಲ್ಲಿ ಮಧ್ಯಸೂತ್ರದಿಂದ ಅರ್ಧಜ್ಯಾದ ತುದಿಯಲ್ಲಿ ಸಂಚರಿಸತ್ತದೆಯೇ ಹೊರತು ಪೂರ್ಣಜ್ಯಾದ ತುದಿಯಲ್ಲಿ ಅಲ್ಲ. ಆದ್ದರಿಂದ ಗ್ರಹಗಣಿತದಲ್ಲಿ ಈ ಪೂರ್ಣಜ್ಯಾದ ಅರ್ಧವಾದ ಅರ್ಧಜ್ಯಾವೇ ಜ್ಯಾ ಎಂಬುದಾಗಿ ವ್ಯವಹರಿಸಲ್ಪಡುತ್ತದೆ. ಹೊರತು ಪೂರ್ಣಜ್ಯಾವನ್ನು ಅಲ್ಲ. ಹೀಗೆ ಭಾರತೀಯಗಣಕರು ಈ ಅರ್ಧಜ್ಯಾದ ಕುರಿತಾಗಿ ಜ್ಯೋತ್ಪತ್ತಿಯ ಸಿದ್ಧಾಂತಗಳನ್ನು ಪ್ರತಿಪಾದಿಸಿದರು.
ಸಮ್ರಾಟ್ ಜಗನ್ನಾಥನಿಂದ ಸಿದ್ಧಾಂತಸಮ್ರಾಟ್ ಎಂಬ ಒಂದು ಖಗೋಲಶಾಸ್ತ್ರೀಯಗ್ರಂಥವು ರಚಿಸಲ್ಪಟ್ಟಿತು. ಈ ಗ್ರಂಥದಲ್ಲಿ ಜಗನ್ನಾಥನು ಜ್ಯೋತ್ಪತ್ತಿಯ ಸಿದ್ಧಾಂತಗಳನ್ನು ಪ್ರತಿಪಾದಿಸುವುದಕ್ಕಾಗಿಯೇ ೨೫ ಶ್ಲೋಕಗಳುಳ್ಳ ಜ್ಯೋತ್ಪತ್ತಿಪ್ರಕರಣವನ್ನೇ ಬರೆದಿದ್ದಾನೆ. ಈ ಪ್ರಕರಣದಲ್ಲಿ ಸಮ್ರಾಟ್ ಜಗನ್ನಾಥನಿಂದ ವೃತ್ತದಲ್ಲಿ ಜ್ಯಾಕ್ಷೇತ್ರದ ಸಂಸ್ಥಾನ, ಜ್ಯಾಕ್ಷೇತ್ರದಲ್ಲಿ ಜಾತ್ಯತ್ರಿಭುಜದ (ಲಂಬಕೋಣತ್ರಿಭುಜದ) ಸಂಸ್ಥಾನ, ಉತ್ಕ್ರಮಜ್ಯಾಸಾಧನೆ, ಭುಜಾರ್ಧಾಂಶಕಜ್ಯಾಸಾಧನೆ, ಚಾಪಪಂಚಮಾಂಶಜ್ಯಾಸಾಧನೆ ಮುಂತಾದ ವಿಷಯಗಳು ಪ್ರತಿಪಾದಿಸಲ್ಪಟ್ಟಿವೆ. ವಿಶೇಷಸೂತ್ರಗಳ ಉಪಪತ್ತಿಗಳನ್ನೂ ಜಗನ್ನಾಥನು ನಿರೂಪಿಸಿದ್ದಾನೆ. ಅಸಕೃತ್ ವಿಧಿಯಿಂದ ಚಾಪಪಂಚಮಾಂಶಜ್ಯಾಸಾಧನೆಯು ಜಗನ್ನಾಥನ ವೈಶಿಷ್ಟ್ಯವಾಗಿದೆ. ಈ ಶೋಧಪತ್ರದಲ್ಲಿ ಸಮ್ರಾಟ್ ಜಗನ್ನಾಥನು ಸಿದ್ಧಾಂತಸಮ್ರಾಟ್ ಗ್ರಂಥದಲ್ಲಿ ಪ್ರತಿಪಾದಿಸರುವ ಜ್ಯೋತ್ಪತ್ತಿಯ ಸಿದ್ಧಾಂತಗಳ ಸಂಕ್ಷಿಪ್ತ ಪರಿಚಯವು ಮಾಡಲ್ಪಟ್ಟಿದೆ.
Pages: 94-99 | 216 Views 91 Downloads
How to cite this article:
ಗಿರೀಶ ಭಟ್ ಬಿ. ಜ್ಯೋತ್ಪತ್ತಿಗೆ ಸಮ್ರಾಟ್ ಜಗನ್ನಾಥನ ಕೊಡುಗೆ. Int J Kannada Res 2023;9(4):94-99.