2022, Vol. 8 Issue 4, Part A
ಕುಮಾರವ್ಯಾಸನ ಗದಗು ಭಾರತ, ಒಂದು ಕಿರು ಪರಿಚಯ
Author(s): Dr. M Govind Pai
Abstract: ಕರ್ಣಾಟಕ ರಾಜ್ಯದ ಗದಗು ಮುಖ್ಯವಾಗಿ ಈ ನಾಲ್ವರಿಂದ ಪ್ರಸಿದ್ಧವಾಗಿದೆ, ಶ್ರೀ ವೀರನಾರಾಯಣ, ನಾರಣಪ್ಪ, ಪಂಚಾಕ್ಷರಿ ಗವಾಯಿ ಮತ್ತು ಭೀಮಸೇನ್ ಜೋಶಿ. ಈ ಮೇಲೆ ಹೇಳಿದವರಲ್ಲಿ ‘ಗದಗು ಭಾರತ’ ಅಥವಾ ‘ಕನ್ನಡ ಭಾರತ’ವನ್ನು ಬರೆದ ನಾರಣಪ್ಪನ ಬಗ್ಗೆ 9ನೆ ಕ್ಲಾಸಿನಲ್ಲಿದ್ದಾಗ ಪಠ್ಯಪುಸ್ತಕದಲ್ಲಿ (ಪುಸ್ತಕದ ಹೆಸರನ್ನು ಮರೆತಿದ್ದೇನೆ) ಓದಿದ ಕತೆಯನ್ನು ಹೇಳುತ್ತೇನೆ. ಮೊದಲು ಕತೆ, ಆನಂತರ ಹೈಸ್ಕೂಲಿನಲ್ಲಿ ಓದಿದ ನಾರಣಪ್ಪನ ಪದ್ಯಗಳನ್ನು, ಇತರರು ಬರೆದ ಮಹಾಭಾರತದ ಕತೆಗಳನ್ನು ನೆನಪಿನಿಂದ ಕೆದಕಿ, ಅವುಗಳ ಮೂಲ ನುಡಿಗಳನ್ನು ಗದಗು ಭಾರತದಲ್ಲಿ ಹುಡುಕಿ, ಉದ್ಧರಿಸಿ ಬರೆಯುತ್ತೇನೆ, ಅರ್ಥವನ್ನು ಕೊಡುತ್ತೇನೆ. ಇಲ್ಲಿ ಹೇಳಿದ ಎಲ್ಲ ಪ್ರಕರಣಗಳಲ್ಲಿ ಮುಖ್ಯ ನುಡಿಗಳನ್ನು ಮಾತ್ರ ಬರೆಯುತ್ತೇನೆ. ಈ ಲೇಖನವು ಸ್ವಲ್ಪ ದೀರ್ಘವಾಗಿದೆ ಎಂದು ಗೊತ್ತು, ಹೃಸ್ವ ಮಾಡಿದರೆ ನಾರಣಪ್ಪನಿಗೆ ಅಪಚಾರವಾಗಬಹುದೆಂದು ಹೆದರಿ ಹಾಗೆ ಮಾಡಲಿಲ್ಲ. ಲೇಖನ ದೀರ್ಘವಾಗಿದ್ದರೆ ಕಿರು ಪರಿಚಯ ಎನ್ನುವುದು ಯಾಕೆ ಎಂಬ ಪ್ರಶ್ನೆ ಬರುತ್ತದೆ. ಗದಗು ಭಾರತದಂತಹ ಶ್ರೇಷ್ಠ ಕಾವ್ಯಕ್ಕೆ ಈ ಪರಿಚಯ ಕಿರಿದಾದದ್ದೇ! ನಾನೇನು ವಿದ್ವಾಂಸನಲ್ಲ, ಪಂಡಿತನಂತೂ ಮೊದಲೇ ಅಲ್ಲ. ಕನ್ನಡ ಸಾಹಿತ್ಯದ ಮೇಲಿರುವ ಅಪ್ರತಿಮ ಗೌರವದಿಂದಾಗಿ ಈ ಕೆಲಸವನ್ನು ಕೈಕೊಂಡೆ. 1972 ರಿಂದ ವೈದ್ಯಕೀಯ ವೃತ್ತಿ ನಡಿಸಿ, ಎರಡು ದೇಶಗಳಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಈಗ ವೈದ್ಯವಿಜ್ಞಾನದ ಮಾಸಿಕಗಳಿಗೆ ಬರೆಯುತ್ತಾ ನನ್ನ ಪ್ರೊಫೆಸರುಗಳ ಋಣವನ್ನು ತೀರಿಸುತ್ತಾ ಇದ್ದೇನೆ. ನನ್ನ ಚಿರಂಜೀವಿಗಳು ಚಿಕ್ಕವರಿದ್ದಾಗ ಅವರಿಗೆ ಲೆಕ್ಕ, ವಿಜ್ಞಾನ, ಇಂಗ್ಲಿಷ್, ಹಿಂದಿ ಕಲಿಸಿ ನನ್ನ ಶಾಲಾ ಮಾಸ್ತರುಗಳ ಋಣ ತೀರಿಸಿಕೊಂಡೆ. ಆದರೆ ಅವರಿಗೆ ಕನ್ನಡ ಕಲಿಸುವ ಪ್ರಮೇಯವೇ ಬಂದಿರಲಿಲ್ಲ. ಬಂದಾಗ, ಅವರು ಉಡುಪಿಯ ಶಾಲೆಯೊಂದರ ಹಾಸ್ಟೆಲ್ ಸೇರಿಬಿಟ್ಟಿದ್ದರು. ಈಗ ಕನ್ನಡದಲ್ಲಿ ಬರೆದು, ನನ್ನ ಕನ್ನಡ ಪಂಡಿತರ ಋಣಭಾರ ತೀರಿಸದಿದ್ದಲ್ಲಿ ಮೇಲೆ ಹೋದಾಗ ಅವರಿಗೆಂತು ಮೊಗ ತೋರಿಸಬಲ್ಲೆ? ಬಗ್ಗೆ ಬರೆಯಲು ಕುಮಾರವ್ಯಾಸನಂತಹ ಕವಿಯ ಕಾವ್ಯವಲ್ಲದೆ ಮತ್ತಾರ ಕಾವ್ಯ ಯೋಗ್ಯ? ಮಹಾಭಾರತದ ಕತೆ ಎಲ್ಲರಿಗೂ ಗೊತ್ತಿದೆ, ಆದುದರಿಂದ ಅದಕ್ಕೆ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ. ಈ ಕತೆಯಲ್ಲಿ ನಾರಣಪ್ಪನು ಹೇಗೆ ಘಟನೆಗಳನ್ನು ವರ್ಣಿಸಿದ್ದಾನೆ, ಅವನ ಶೈಲಿ ಏನು, ಪಾತ್ರಗಳನ್ನು ಯಾವ ರೀತಿಯಲ್ಲಿ ಚಿತ್ರಿಸಿದ್ದಾನೆ ಎಂಬುದನ್ನು ಅವನ ಕೆಲವು ನುಡಿಗಳನ್ನೇ ಉದ್ದರಿಸಿ ಹೇಳಿ, ಓದುಗರಲ್ಲಿ ಇಡೀ ಗದಗು ಭಾರತವನ್ನು ಓದುವ ಆಸಕ್ತಿಯನ್ನು ಹುಟ್ಟಿಸುವುದು ನನ್ನ ಪ್ರಯತ್ನ. ಈ ಕಾವ್ಯವು ಸುಲಲಿತ ಕನ್ನಡದಲ್ಲಿದೆ. ವಿವಿಧ ಪಾಠಾಂತರಗಳಿದ್ದ ಗದಗು ಭಾರತದ ಅನೇಕ ಪ್ರತಿಗಳು ಪ್ರಕಾಶಿತವಾಗಿವೆ ಎಂದು ನಾವು ನೆನಪಿಟ್ಟುಕೊಳ್ಳಬೇಕು.
Pages: 01-16 | 471 Views 192 Downloads
How to cite this article:
Dr. M Govind Pai. ಕುಮಾರವ್ಯಾಸನ ಗದಗು ಭಾರತ, ಒಂದು ಕಿರು ಪರಿಚಯ. Int J Kannada Res 2022;8(4):01-16.