2022, Vol. 8 Issue 1, Part A
ಗ್ರಾಮೀಣ ಅಭಿವೃದ್ಧಿಯ ಪುನಶ್ಚೇತನದ ಕುರಿತಂತೆ ಕೋವಿಡ್ - 19 ಸಾಂಕ್ರಾಮಿಕ ಅವಧಿಯಲ್ಲಿ ರಾಮನಗರ ಜಿಲ್ಲೆ, ಕಾಳಾರಿ ಗ್ರಾಮದಲ್ಲಿ ನಡೆದ ಚಟುವಟಿಕೆಗಳ ಒಂದು ಪ್ರಾಯೋಗಿಕ ಅಧ್ಯಯನ
Author(s): ಡಾ. ನಾಗರಾಜ ಕೆ.ಸಿ., ದಿವ್ಯ ಎಂ. ಬಿ., ಪುರುಷೋತ್ತಮ
Abstract: ಎರಡನೇ ಮಹಾಯುದ್ಧದ ನಂತರದಲ್ಲಿ ಇಡೀ ಜಗತ್ತು ಎದುರಿಸುತ್ತಿರುವ ಬಹು ಅಪಾಯಕಾರಿ ಸನ್ನಿವೇಶಗಳಲ್ಲಿ ಇತ್ತೀಚಿಗಿನ ಕೋವಿಡ್-19 ಸಾಂಕ್ರಾಮಿಕ ಸಮಸ್ಯೆಯು ಪ್ರಮುಖವಾದುದಾಗಿದೆ. ದಿನದಿಂದ ದಿನಕ್ಕೆ ಇಡೀ ಮಾನವ ಸಂಕುಲವನ್ನೇ ಸರ್ವನಾಶದತ್ತ ಕೊಂಡೊಯ್ದ ಈ ಸಮಸ್ಯೆಯನ್ನು ಸರಿಪಡಿಸಲು ವಿಶ್ವದ ಅನೇಕ ಸರ್ಕಾರಗಳು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತವೂ ಕೂಡಾ ಜನತಾ ಕಫ್ರ್ಯೂ, ಲಾಕ್‍ಡೌನ್, ಮಾಸ್ಕ್, ಸ್ಯಾನಿಟೈಸರ್‍ನ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡುವಿಕೆ ಇವುಗಳೆಲ್ಲದರ ಬಗ್ಗೆ ಪ್ರಚಾರ ಮತ್ತು ನಿಗದಿತ ಸಮಯಕ್ಕೆ ಸರಿಯಾಗಿ ವ್ಯಾಕ್ಸಿನೇಷನ್ ತೆಗೆದು ಕೊಳ್ಳುವುದು ಮುಂತಾದ ಕ್ರಮಗಳ ಮೂಲಕ ಕೋವಿಡ್‍ನ ವಿರುದ್ಧ ಹೋರಾಡಿ ವಿಶ್ವದಾದ್ಯಂತ ಪ್ರಶಂಸೆಗೂ ಪಾತ್ರವಾಗಿದೆ. ಆದಾಗ್ಯೂ, ಈ ಲಾಕ್‍ಡೌನ್ ಅವಧಿಯು ಇಲ್ಲಿನ ಜನಜೀವನದ ಆರ್ಥಿಕ ವೆಚ್ಚ ಮತ್ತು ಸಾಮಾಜಿಕ ಜೀವನದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರಿದೆ ಎಂಬುವುದರಲ್ಲಿ ಸಂಶಯವಿಲ್ಲ. ಭಾರತದಾದ್ಯಂತ ಮಾರ್ಚ್ 2020ರಲ್ಲಿ ಕೋವಿಡ್‍ನಿಂದ ಆರಂಭವಾದ ಈ ಲಾಕ್‍ಡೌನ್ ಕ್ರಮೇಣ ವಿವಿಧ ಪ್ರಾದೇಶಿಕ ಮಟ್ಟದಲ್ಲಿ ಹಲವಾರು ಹಂತಗಳಲ್ಲಿ ಸಮಸ್ಯೆಯ ಗಂಭೀರತೆಯ ಆಧಾರದಲ್ಲಿ ವಿವಿಧ ನಿರ್ಬಂಧನೆಗಳೊಂದಿಗೆ ಎಲ್ಲಾ ವಲಯಗಳಲ್ಲಿನ ಉದ್ಯಮಗಳು, ಸಾಮಾಜಿಕ-ಆರ್ಥಿಕ ಚಟುವಟಿಕೆಗಳ ಮೇಲೆ ಸಂಪೂರ್ಣವಾಗಿ ವಿಸ್ತರಿಸಲ್ಪಟ್ಟಿತು. ಆರಂಭಿಕ ಹಂತದ ಲಾಕ್‍ಡೌನ್ ದಿನಗಳಲ್ಲಿ ಕೃಷಿ ಮೌಲ್ಯ ಸರಪಳಿಯು ಹಾಗೂ ವಿವಿಧ ಕೈಗಾರಿಕಾ ವಲಯಗಳು ದೊಡ್ಡ ಪ್ರಮಾಣದ ಅಡೆತಡೆಗಳನ್ನು ಎದುರಿಸಿದವು. ಇದರಿಂದಾಗಿ ಸರಣಿಯೋಪಾದಿಯಲ್ಲಿ ಕೃಷಿಕರು, ಕೃಷಿಯ ಇತರೆ ಅವಲಂಬಿತ ಚಟುವಟಿಕೆಗಳೆಲ್ಲವೂ ಗಂಭೀರ ದುಷ್ಪರಿಣಾಮವನ್ನು ಎದುರಿಸ ಬೇಕಾಯಿತು. ಈ ಸಾಂಕ್ರಾಮಿಕತೆಯಿಂದಾಗಿ ದೇಶದ ಮಹಾನಗರಗಳು ಹಾಗೂ ಇತರೆ ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಜನರ ಭಾರೀ ಹಿಮ್ಮುಖ ವಲಸೆಯನ್ನು ಪ್ರಚೋದಿಸಿತು. ಈ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಹಲವಾರು ಇಲಾಖೆಗಳು ಮಾತ್ರವಲ್ಲದೇ ಒಂದಷ್ಟು ಸಂಘ-ಸಂಸ್ಥೆಗಳು, ದಾನಿಗಳು, ಸ್ವಯಂಸೇವಕರು, ಯುವ ಸಮುದಾಯ ಸ್ವಯಂಪ್ರೇರಿತರಾಗಿ ತಮ್ಮ ತಮ್ಮ ಶಕ್ತಾನುಸಾರ ಕುಟುಂಬ, ಸಮುದಾಯ, ಗ್ರಾಮ, ಊರುಗಳನ್ನು ಈ ಸಾಂಕ್ರಾಮಿಕತೆಯಿಂದ ರಕ್ಷಿಸುವ ಕಾರ್ಯದೊಂದಿಗೆ ಗ್ರಾಮೀಣಾಭಿವೃದ್ಧಿಯ ವಿವಿಧ ಚಟುವಟಿಕೆಗಳಿಗೂ ಸಹಾಯ, ಸಹಕಾರ ನೀಡಿದ್ದರ ಬಗ್ಗೆಯೂ ಕೇಳಿದ್ದೇವೆ. ಏಕೆಂದರೆ ದೇಶದ ಒಟ್ಟಾರೆ ಪ್ರಗತಿಗೆ ಭಾರತದಲ್ಲಿ ಗ್ರಾಮೀಣಾಭಿವೃದ್ಧಿಯು ಅತ್ಯಂತ ಅಗತ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಸ್ವಚ್ಛತೆ, ನೈರ್ಮಲ್ಯ, ಶಾಲೆಗಳು, ಶಿಕ್ಷಣದ ಮಹತ್ವ, ವೈದ್ಯಕೀಯ-ಆರೋಗ್ಯ ಸೌಲಭ್ಯಗಳು, ಪೌಷ್ಠಿಕಾಂಶದ ಅವಶ್ಯಕತೆಗಳು, ಕೃಷಿ, ಗುಡಿ ಕೈಗಾರಿಕೆಗಳು, ಉದ್ಯೋಗ ಸೃಷ್ಟಿ, ಮನೆಗಳ ನಿರ್ಮಾಣ, ಕೌಶಲ್ಯ ಅಭಿವೃದ್ಧಿ ಮುಂತಾದ ಹತ್ತು ಹಲವು ವಿಷಯಗಳ ಮೇಲೆ ಗಮನ ಹರಿಸುವುದು ಹೆಚ್ಚು ಪ್ರಸ್ತುತವೆನಿಸುತ್ತದೆ. ಈ ಸಂಬಂಧ ಸರ್ಕಾರದ ಕಾರ್ಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಗೊಳಿಸುವುದರಲ್ಲಿ ಗ್ರಾಮೀಣ ಯುವಕರ ಪಾತ್ರದ ಅತಿ ಅವಶ್ಯಕವಾಗಿದೆ. ಅಷ್ಟೇ ಅಲ್ಲದೇ ಪ್ರತೀ ಗ್ರಾಮದ ಅಭಿವೃದ್ಧಿ ಮತ್ತು ರಕ್ಷಣೆಯ ಜವಾಬ್ದಾರಿ ಅಲ್ಲಿನ ಯುವಕರ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಇತ್ತೀಚೆಗಿನ ಕೊರೋನಾ ಸಾಂಕ್ರಾಮಿಕ ಕಾಲಾವಧಿಯಲ್ಲಿ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕಾಳಾರಿ ಗ್ರಾಮದಲ್ಲಿನ ಪ್ರಜ್ಞಾವಂತ ಯುವಜನತೆಯು ಸ್ವಯಂಪ್ರೇರಿತವಾಗಿ ಕೈಗೊಂಡ ಹಲವು ಸಮಯೋಚಿತ ಕಾರ್ಯಕ್ರಮ/ ಚಟುವಟಿಕೆಗಳ ಬಗ್ಗೆ ವಿವರ ಹಾಗೂ ಅವುಗಳ ಪರೀಕ್ಷಾತ್ಮಕತೆಯ ಕುರಿತಂತೆ ಬೆಳಕನ್ನು ಚೆಲ್ಲಲು ಈ ಸಂಶೋಧನಾ ಪ್ರಬಂಧವು ಪ್ರಯತ್ನಿಸುತ್ತದೆ.
Pages: 04-18 | 990 Views 145 Downloads
How to cite this article:
ಡಾ. ನಾಗರಾಜ ಕೆ.ಸಿ., ದಿವ್ಯ ಎಂ. ಬಿ., ಪುರುಷೋತ್ತಮ. ಗ್ರಾಮೀಣ ಅಭಿವೃದ್ಧಿಯ ಪುನಶ್ಚೇತನದ ಕುರಿತಂತೆ ಕೋವಿಡ್ - 19 ಸಾಂಕ್ರಾಮಿಕ ಅವಧಿಯಲ್ಲಿ ರಾಮನಗರ ಜಿಲ್ಲೆ, ಕಾಳಾರಿ ಗ್ರಾಮದಲ್ಲಿ ನಡೆದ ಚಟುವಟಿಕೆಗಳ ಒಂದು ಪ್ರಾಯೋಗಿಕ ಅಧ್ಯಯನ. Int J Kannada Res 2022;8(1):04-18.