Abstract: ಮಧ್ಯಕಾಲೀನ ಕನ್ನಡ ಸಾಹಿತ್ಯದ ಮಹತ್ವದ ಕವಿ ರತ್ನಾಕರವರ್ಣಿ. ವಿಶಿಷ್ಟ ಸಾಂಸ್ಕøತಿಕ ಹಿನ್ನೆಲೆಯುಳ್ಳ ರತ್ನಾಕರವರ್ಣಿ ವಸ್ತುವಿನ ಆಯ್ಕೆಯಿಂದ ಹಿಡಿದು ನಿರ್ವಹಣೆ ಹಾಗೂ ನಿರೂಪಣೆಯಲ್ಲಿ ಹೊಸತನವನ್ನು ಅಳವಡಿಸಿಕೊಂಡವನು. ಇವನ ಮೇರು ಕೃತಿಯೆಂದರೆ ‘ಭರತೇಶ ವೈಭವ’. ಸಾಂಗತ್ಯದಲ್ಲಿ ಬರೆಯಲ್ಪಟ್ಟ ಈ ಕೃತಿಯು ಕನ್ನಡ ಸಾಹಿತ್ಯದಲ್ಲಿ ಹೊಸ ಶಕೆಯೊಂದರೆ ಆವಿರ್ಭಾವಕ್ಕೆ ಕಾರಣವಾಯಿತು. ಅಧ್ಯಾತ್ಮ ಸಾಧನೆಗೆ ಅತ್ಯಂತ ಕಠಿಣ ನಿಯಮಗಳನ್ನು ಬೋಧಿಸುವ ಜೈನ ಧರ್ಮದಲ್ಲಿದ್ದುಕೊಂಡು ದೀಕ್ಷೆವಹಿಸಿ ಸಂಪೂರ್ಣ ಧಾರ್ಮಿಕ ಆವರಣದಲ್ಲಿದ್ದ ರತ್ನಾಕರ ಧಾರ್ಮಿಕ ನಿರ್ದೇಶನದಂತೆ ಮಾತನಾಡಬೇಕಾದದ್ದು ಯೋಗ, ತ್ಯಾಗ, ಆಧ್ಯಾತ್ಮಗಳನ್ನು ಕುರಿತೇ ಹೊರತು ಭೋಗವನ್ನು ಕುರಿತಲ್ಲ. ಒಂದು ವೇಳೆ ಆ ಮಾತುಗಳನ್ನಾಡಿದರೂ ಅದು ನಕಾರಾತ್ಮಕ ನೆಲೆಯಲ್ಲಿಯೇ ಕಾಣಿಸಿಕೊಳ್ಳಬೇಕು. ಆದರೆ ರತ್ನಾಕರ ಆ ವಲಯಗಳನ್ನು ಮೀರಿ ಯೋಗದ ಜೊತೆಗೆ ಭೋಗದ ಸಿದ್ಧಿ ಕೊಡುವ ಅನುಪಮ ಆಧ್ಯಾತ್ಮಿಕ ಆನಂದವನ್ನು ಭರತೇಶನ ಮೂಲಕ ತೋರಿಸಿಕೊಡುತ್ತಾನೆ. ಅವನ ‘ಹಂಸಕಲೆ’, ‘ಭೇದವಿಜ್ಞಾನ’ಗಳು ಯೋಗ-ಭೋಗದ ಸಂಕಲನ ವಿಕಲನಗಳನ್ನೇ ಪ್ರತಿಪಾದಿಸುತ್ತವೆ. ಹಾಗಾಗಿ ಜೈನ ಆವರಣದಲ್ಲಿ ರತ್ನಾಕರನೂ, ರತ್ನಾಕರನು ಬರೆದ ಭರತೇಶ ವೈಭವವೂ ಪ್ರಯೋಗಾತ್ಮಕ ನೆಲೆಯಲ್ಲಿ ಬಹುಮುಖ್ಯವಾಗುತ್ತವೆ. ಮತ್ತು ಸಾಹಿತ್ಯ ಚರಿತ್ರೆಯಲ್ಲಿ ರತ್ನಾಕರನ ಸ್ಥಾನವನ್ನು ನಿಗದಿಪಡಿಸುತ್ತವೆ. ಈ ನೇಪತ್ಯದಲ್ಲಿಯೇ ರತ್ನಾಕರನ ‘ಭರತೇಶ ವೈಭವ’ ಕೃತಿಯ ವೈಶಿಷ್ಟ್ಯವನ್ನು ಇಲ್ಲಿ ಗುರುತಿಸಲಾಗಿದೆ.